ಪುತ್ರಕಾಮೇಷ್ಟಿ -
ಇದೊಂದು ಕಾಮೇಷ್ಟಿ. ಮಕ್ಕಳಿಲ್ಲದವರು ಮಕ್ಕಳನ್ನು ಪಡೆಯುವ ಇಚ್ಚೆಯಿಂದ ಮಾಡುವ ಯಾಗ. ದಶರಥ ಮಕ್ಕಳನ್ನು ಪಡೆಯುವುದಕ್ಕಾಗಿ ಈ ಯಾಗವನ್ನು ಮಾಡಿದನೆಂದು ಶ್ರೀಮದ್ರಾಮಾಯಣದಲ್ಲಿದೆ.  ಮಕ್ಕಳು ಹುಟ್ಟಲು ಪ್ರತಿಬಂಧಕವಾದ ಸಕಲ ದುರಿತ ನಿವಾರಣೆಗಾಗಿ ಮೊದಲು ಭಗವದಂಗ ಭೂತ ಬ್ರಹ್ಮಾದಿ ದೇವತಾರಾಧನೆ ಮಾಡಿದ ಬಳಿಕ ಅಶ್ವಮೇಧ ಯಾಗವನ್ನು ಮಾಡಿ ಅನಂತರ ಸಾಕ್ಷಾದ್ಭಗವದಾರಾಧನಾ ರೂಪ ಪುತ್ರ ಪ್ರಾಪ್ತಿ ಕರಣವಾದ ಈ ಇಷ್ಟಿಯನ್ನು ದಶರಥ ಮಾಡಿದಾಗ ಅಗ್ನಿ ಪ್ರತ್ಯಕ್ಷನಾಗಿ ಪಾಯಸವನ್ನು ತಂದುಕೊಟ್ಟ. ಅದನ್ನು ದಶರಥನ ಮೂವರು ಪತ್ನಿಯರೂ ಭಕ್ತಿಯಿಂದ ಸ್ವೀಕರಿಸಿ ಗರ್ಭವತಿಯರಾಗಿ ಮಕ್ಕಳನ್ನು ಪಡೆದರು.

ಊರ್ವನ ಮಗ ಔರ್ವನಿಗೆ ಮಕ್ಕಳಿರಲಿಲ್ಲ. ತನಗೆ ಪುತ್ರನನ್ನು ಕೊಡುವಂತೆ ಆತ ಅತ್ರಿ ಮಹರ್ಷಿಗಳನ್ನು ಯಾಚಿಸುತ್ತಾನೆ. ಅತ್ರಿ ತನ್ನ ಸಂತಾನವನ್ನು ಆತನಿಗೆ ಕೊಡುತ್ತಾನೆ. ಇದರಿಂದ ಅತ್ರಿ ಸಂತಾನರಹಿತನಾಗಿದ್ದು ಮಾತ್ರವಲ್ಲದೆ ವೀರ್ಯರಹಿತನೂ ಆಗುತ್ತಾನೆ. ಸಂತಾನೋತ್ಪತ್ತಿ ಸಾಮಥ್ರ್ಯರಹಿತನೂ ಯಾವ ಇತರ ಕೆಲಸ ಮಾಡಲು ಅಸಮರ್ಥನೂ ಆದುದನ್ನು ಮನಗಂಡ ಅತ್ರಿ ಪ್ರಜೋತ್ಪಾದನ ಸಾಮಥ್ರ್ಯ ಪ್ರಾಪ್ತಿಗಾಗಿ ಚತೂರಾತ್ರವೆಂಬ ಯಾಗವನ್ನು ಮಾಡುತ್ತಾನೆ. ಅದರ ಫಲವಾಗಿ ಅತ್ರಿಗೆ ಸುಹೋತಾ ಸೂದ್ಗಾತಾ ಸ್ವರ್ಧರ್ಯು ಸುಸಭೇಯರೆಂಬ ನಾಲ್ಕು ಮಂದಿ ಪುತ್ರರು ಹುಟ್ಟುತ್ತಾರೆ. ಆ ಮಕ್ಕಳು ಯಜ್ಞಕ್ರಿಯೆಯಲ್ಲೂ ಉಪದೇಶದಲ್ಲೂ ಕುಶಲರಾಗಿರುತ್ತಾರೆ. ಇದೂ ಪುತ್ರಕಾಮೇಷ್ಟಿಯ ಒಂದು ಬಗೆ.

ಈ ಯಜ್ಞ ವಿಧಾನ ಕೃಷ್ಣಯಜುರ್ವೇದ ಸಂಹಿತೆಯಲ್ಲಿದೆ.						(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ